[1] ಇಸ್ಲಾಮಿನ ಆರಂಭ ಕಾಲದಲ್ಲಿ ಸೂರ್ಯಾಸ್ತದ ವೇಳೆ ಉಪವಾಸ ತೊರೆದರೆ ನಂತರ ಇಶಾ ನಮಾಝಿನ ತನಕ ಅಥವಾ ಮಲಗುವ ತನಕ ಮಾತ್ರ ತಿನ್ನುವುದು, ಕುಡಿಯುವುದು ಮತ್ತು ಲೈಂಗಿಕ ಸಂಪರ್ಕ ಮಾಡುವುದನ್ನು ಅನುಮತಿಸಲಾಗಿತ್ತು. ಮಲಗಿದ ನಂತರ ಇವೆಲ್ಲವೂ ನಿಷಿದ್ಧವಾಗಿದ್ದವು. ಈ ನಿರ್ಬಂಧವು ಕಠಿಣವಾಗಿತ್ತು ಮತ್ತು ಅದನ್ನು ಪಾಲಿಸಲು ಕಷ್ಟವಾಗುತ್ತಿತ್ತು. ಆದ್ದರಿಂದ ಅಲ್ಲಾಹು ಈ ನಿರ್ಬಂಧಗಳನ್ನು ತೆಗೆದುಹಾಕಿ ಪ್ರಭಾತೋದಯದ ತನಕ ತಿನ್ನುವ, ಕುಡಿಯುವ ಮತ್ತು ಲೈಂಗಿಕ ಸಂಪರ್ಕ ಮಾಡುವ ರಿಯಾಯಿತಿಯನ್ನು ನೀಡಿದನು.
[1] ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಮೋಸ ಮಾಡಿ ಅವನ ಆಸ್ತಿಯನ್ನು ಕಬಳಿಸುತ್ತಾನೆ. ಆದರೆ ಆಸ್ತಿ ಕಳಕೊಂಡವನಿಗೆ ಅವನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿರುವುದಿಲ್ಲ. ಆ ಮೋಸಗಾರ ಈ ದೌರ್ಬಲ್ಯವನ್ನು ಸದುಪಯೋಗಪಡಿಸಿ ನ್ಯಾಯಾಲಯದಲ್ಲಿ ತೀರ್ಪು ತನ್ನ ಪರ ಬರುವಂತೆ ನೋಡಿಕೊಳ್ಳುತ್ತಾನೆ. ಹೀಗೆ ಇನ್ನೊಬ್ಬರಿಂದ ಆಸ್ತಿಯನ್ನು ಕಸಿದುಕೊಳ್ಳುವುದು ಪಾಪ ಮತ್ತು ಅನ್ಯಾಯವಾಗಿದೆ. ನ್ಯಾಯಾಲಯದ ತೀರ್ಪು ನಿಷಿದ್ಧವಾದುದನ್ನು ಧರ್ಮಸಮ್ಮತಗೊಳಿಸುವುದಿಲ್ಲ.
[1] ಅಜ್ಞಾನಕಾಲದಲ್ಲಿ ಜನರು ಹಜ್ ಅಥವಾ ಉಮ್ರಕ್ಕೆ ಇಹ್ರಾಂ ಧರಿಸಿದ ನಂತರ ಯಾವುದಾದರೂ ಅಗತ್ಯಕ್ಕಾಗಿ ಮನೆಗೆ ಬರಬೇಕಾಗಿ ಬಂದರೆ ಬಾಗಿಲಿನ ಮೂಲಕ ಒಳ ಬರುತ್ತಿರಲಿಲ್ಲ; ಬದಲಿಗೆ ಗೋಡೆಯಲ್ಲಿ ಕನ್ನ ಕೊರೆದು ಅದರ ಮೂಲಕ ಒಳ ಬರುತ್ತಿದ್ದರು. ಅವರು ಇದನ್ನು ಪುಣ್ಯ ಕಾರ್ಯವೆಂದು ತಿಳಿದಿದ್ದರು.
[1] ಇದು ಮುಸಲ್ಮಾನರಿಗೆ ಯುದ್ಧ ಮಾಡಲು ಅನುಮತಿ ನೀಡುತ್ತಾ ಅವತೀರ್ಣವಾದ ಮೊದಲ ವಚನವಾಗಿದೆ. ಮುಸಲ್ಮಾನರ ವಿರುದ್ಧ ಯುದ್ಧಕ್ಕೆ ಮುಂದಾಗುವವರೊಡನೆ ಯುದ್ಧ ಮಾಡಲು ಈ ವಚನದಲ್ಲಿ ಅನುಮತಿ ನೀಡಲಾಗಿದೆ. ಆದರೆ ಮುಸಲ್ಮಾನರು ಯಾವುದೇ ಕಾರಣಕ್ಕೂ ಎಲ್ಲೆ ಮೀರಬಾರದು. ಎಲ್ಲೆ ಮೀರುವುದೆಂದರೆ ಸತ್ತ ಯೋಧರ ಅಂಗಾಂಗಗಳನ್ನು ವಿರೂಪಗೊಳಿಸುವುದು, ಯುದ್ಧದಲ್ಲಿ ಭಾಗವಹಿಸದ ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಹತ್ಯೆ ಮಾಡುವುದು, ಮರಗಳನ್ನು ಕಡಿಯುವುದು ಅಥವಾ ಸುಡುವುದು, ಪ್ರಾಣಿಗಳನ್ನು ಕೊಲ್ಲುವುದು ಇತ್ಯಾದಿ.