[1] ಉಹುದ್ ಯುದ್ಧದ ಸಂದರ್ಭ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲಾಳುಪಡೆ, ಅಶ್ವಸೇನೆ ಮತ್ತು ಬಿಲ್ಲುಗಾರರನ್ನು ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ನಿಲ್ಲಿಸಿದ್ದರು. ಯುದ್ಧ ತಂತ್ರದ ಪ್ರಮುಖ ಭಾಗವಾಗಿ ಒಂದು ಗುಡ್ಡೆಯ ಮೇಲೆ ಕಾವಲು ನಿಲ್ಲಿಸಲಾಗಿದ್ದ ಬಿಲ್ಲುಗಾರರು ತಮ್ಮ ಕಾರ್ಯನಿರ್ವಹಣೆಯಲ್ಲಿ ತಪ್ಪೆಸಗಿದ ಕಾರಣ ಉಹುದ್ ಯುದ್ಧದಲ್ಲಿ ಮುಸ್ಲಿಮರಿಗೆ ಅನೇಕ ನಾಶ-ನಷ್ಟಗಳು ಸಂಭವಿಸಿದವು. ಯುದ್ಧದಲ್ಲಿ ಹೋರಾಡುತ್ತಿದ್ದ ಎರಡು ಗೋತ್ರದ ಜನರು ದಿಗಿಲುಗೊಂಡು ಯುದ್ಧದಿಂದ ಪಲಾಯನ ಮಾಡಬೇಕೆಂದು ಒಂದು ಕ್ಷಣ ಯೋಚಿಸಿದರು. ಆದರೆ ಅಲ್ಲಾಹು ಅವರ ಮನಸ್ಸಿಗೆ ದೃಢತೆಯನ್ನು ನೀಡಿ ಅವರನ್ನು ನಿಲ್ಲಿಸಿದನು.
[1] ಉಹುದ್ ಯುದ್ಧದಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಂದಿನ ಹಲ್ಲು ತುಂಡಾಗಿ ಮುಖಕ್ಕೆ ಗಾಯವಾದಾಗ ಅವರು ಬೇಸರದಿಂದ ಹೇಳಿದರು: “ತಮ್ಮ ಪ್ರವಾದಿಯನ್ನು ಗಾಯಗೊಳಿಸಿದ ಜನರು ಯಶಸ್ವಿಯಾಗುವುದಾದರೂ ಹೇಗೆ?” ಆಗ ಅಲ್ಲಾಹು ಅವರ ಮಾತನ್ನು ತಿದ್ದುತ್ತಾ ಈ ವಚನವನ್ನು ಅವತೀರ್ಣಗೊಳಿಸಿದನು. ಅಂದರೆ ಯಾರಿಗೆ ಸನ್ಮಾರ್ಗ ತೋರಿಸಬೇಕು ಯಾರಿಗೆ ತೋರಿಸಬಾರದು? ಯಾರನ್ನು ಶಿಕ್ಷೆ ನೀಡಬೇಕು ಮತ್ತು ಯಾರಿಗೆ ಕ್ಷಮೆ ನೀಡಬೇಕು? ಎಂಬುದನ್ನು ಅಲ್ಲಾಹು ತೀರ್ಮಾನಿಸುತ್ತಾನೆ. ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ತೀರ್ಮಾನಿಸುವ ಯಾವುದೇ ಹಕ್ಕಿಲ್ಲ.