ನಿಶ್ತಯವಾಗಿಯೂ ನೀವು ಮತ್ತು ನಿಮ್ಮ ಜೊತೆಯಲ್ಲಿರುವ ಒಂದು ಗುಂಪು ಜನರು ಕೆಲವೊಮ್ಮೆ ರಾತ್ರಿಯ ಮೂರನೇ ಎರಡು ಭಾಗ, ಕೆಲವೊಮ್ಮೆ ರಾತ್ರಿಯ ಅರ್ಧ ಭಾಗ ಮತ್ತು ಕೆಲವೊಮ್ಮೆ ರಾತ್ರಿಯ ಮೂರನೇ ಒಂದು ಭಾಗದವರೆಗೆ ನಿಂತು ನಮಾಝ್ ಮಾಡುತ್ತೀರಿ ಎಂದು ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಬಹಳ ಚೆನ್ನಾಗಿ ತಿಳಿದಿದೆ. ಅಲ್ಲಾಹನೇ ರಾತ್ರಿ-ಹಗಲುಗಳ (ದೀರ್ಘವನ್ನು) ನಿರ್ಣಯಿಸುವವನು. ಅದನ್ನು ಪೂರ್ಣವಾಗಿ ನೆರವೇರಿಸಲು ನಿಮಗೆ ಸಾಧ್ಯವಿಲ್ಲವೆಂದು ಅವನಿಗೆ ತಿಳಿದಿದೆ. ಆದ್ದರಿಂದ ಅವನು ನಿಮ್ಮ ಮೇಲೆ ಅನುಕಂಪ ತೋರಿದ್ದಾನೆ. ಆದ್ದರಿಂದ ನಿಮಗೆ ಎಷ್ಟು ಕುರ್‌ಆನ್ ಪಠಿಸಲು ಸಾಧ್ಯವೋ ಅಷ್ಟು ಪಠಿಸಿರಿ. ನಿಮ್ಮಲ್ಲಿ ರೋಗಿಗಳಿದ್ದಾರೆ, ಅಲ್ಲಾಹನ ಔದಾರ್ಯವನ್ನು ಹುಡುಕುತ್ತಾ (ಉಪಜೀವನಕ್ಕಾಗಿ) ಭೂಮಿಯಲ್ಲಿ ಸಂಚರಿಸುವವರಿದ್ದಾರೆ ಮತ್ತು ಅಲ್ಲಾಹನ ಮಾರ್ಗದಲ್ಲಿ ಹೋರಾಡುವವರಿದ್ದಾರೆ ಎಂದು ಅವನಿಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ ನಿಮಗೆ ಎಷ್ಟು ಕುರ್‌ಆನ್ ಪಠಿಸಲು ಸಾಧ್ಯವೋ ಅಷ್ಟು ಪಠಿಸಿರಿ. ನಮಾಝ್ ಸಂಸ್ಥಾಪಿಸಿರಿ ಹಾಗೂ ಝಕಾತ್ ನೀಡಿರಿ. ಅಲ್ಲಾಹನಿಗೆ ಅತ್ಯುತ್ತಮವಾದ ಸಾಲವನ್ನು ನೀಡಿರಿ. ನೀವು ನಿಮಗಾಗಿ ಏನೆಲ್ಲಾ ಒಳಿತುಗಳನ್ನು ಮುಂದಕ್ಕೆ ಕಳುಹಿಸುತ್ತೀರೋ ಅದನ್ನು ನೀವು ಅಲ್ಲಾಹನ ಬಳಿ ಅತ್ಯುತ್ತಮವಾಗಿ ಮತ್ತು ಅತಿದೊಡ್ಡ ಪ್ರತಿಫಲವಿರುವುದಾಗಿ ಕಾಣುವಿರಿ. ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.