ಅವರು ಅಂತಿಮದಿನದ ಬಗ್ಗೆ—“ಅದು ಯಾವಾಗ ಸಂಭವಿಸುತ್ತದೆ” ಎಂದು ಕೇಳುತ್ತಾರೆ. ಹೇಳಿರಿ: “ಅದರ ಜ್ಞಾನವಿರುವುದು ನನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಮಾತ್ರ. ಅದರ ಸಮಯದಲ್ಲಿ ಅವನಲ್ಲದೆ ಯಾರೂ ಅದನ್ನು ಪ್ರಕಟಗೊಳಿಸುವುದಿಲ್ಲ. ಭೂಮ್ಯಾಕಾಶಗಳಲ್ಲಿ ಅದು ಅತ್ಯಂತ ಭಾರವಿರುವ (ಭಯಾನಕ) ಸಂಗತಿಯಾಗಿದೆ. ಅದು ಅನಿರೀಕ್ಷಿತವಾಗಿಯೇ ನಿಮ್ಮ ಬಳಿಗೆ ಬರುತ್ತದೆ.” ನಿಮಗೆ ಅದರ ಬಗ್ಗೆ ಜ್ಞಾನವಿದೆಯೆಂಬ ಭಾವನೆಯಿಂದ ಅವರು ನಿಮ್ಮಲ್ಲಿ ಕೇಳುತ್ತಾರೆ. ಹೇಳಿರಿ: “ಅದರ ಜ್ಞಾನವಿರುವುದು ಅಲ್ಲಾಹನಿಗೆ ಮಾತ್ರ.” ಆದರೆ ಜನರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.