ಮೂಸಾ ತಮ್ಮ ಜನರೊಡನೆ ಹೇಳಿದ ಸಂದರ್ಭ: “ನನ್ನ ಜನರೇ! ನೀವೇಕೆ ನನಗೆ ತೊಂದರೆ ಕೊಡುತ್ತೀರಿ? ನಾನು ನಿಮ್ಮ ಬಳಿಗೆ ಬಂದ ಅಲ್ಲಾಹನ ಸಂದೇಶವಾಹಕನೆಂದು ನಿಮಗೆ ಬಹಳ ಚೆನ್ನಾಗಿ ತಿಳಿದಿದೆ.” ನಂತರ ಅವರು (ಜನರು) ಸತ್ಯದಿಂದ ವಿಚಲಿಸಿದಾಗ ಅಲ್ಲಾಹು ಅವರ ಹೃದಯಗಳನ್ನು ವಕ್ರಗೊಳಿಸಿದನು. ದುಷ್ಕರ್ಮಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
ಮರ್ಯಮರ ಮಗ ಈಸಾ ಹೇಳಿದ ಸಂದರ್ಭ: “ಓ ಇಸ್ರಾಯೇಲ್ ಮಕ್ಕಳೇ! ನಾನು ನನಗಿಂತ ಮೊದಲು ಅವತೀರ್ಣವಾದ ತೌರಾತನ್ನು ದೃಢೀಕರಿಸಲು ಮತ್ತು ನನ್ನ ನಂತರ ಬರುವ ಅಹ್ಮದ್[1] ಎಂಬ ಹೆಸರಿನ ಒಬ್ಬ ಸಂದೇಶವಾಹಕರ ಬಗ್ಗೆ ನಿಮಗೆ ಸುವಾರ್ತೆ ತಿಳಿಸಲು ನಿಮ್ಮ ಬಳಿಗೆ ಕಳುಹಿಸಲಾಗಿರುವ ಅಲ್ಲಾಹನ ಸಂದೇಶವಾಹಕನಾಗಿದ್ದೇನೆ.” ಆದರೆ ಅವರು (ಈಸಾ) ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದಾಗ ಅವರು ಹೇಳಿದರು: “ಇದು ಸ್ಪಷ್ಟ ಮಾಟಗಾರಿಕೆಯಾಗಿದೆ.”
[1] ಅಹ್ಮದ್ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಇನ್ನೊಂದು ಹೆಸರು.
ಅಲ್ಲಾಹನ ಮೇಲೆ ಸುಳ್ಳಾರೋಪಿಸುವವನಿಗಿಂತಲೂ ದೊಡ್ಡ ಅಕ್ರಮಿ ಯಾರು? ವಾಸ್ತವವಾಗಿ ಅವನನ್ನು ಇಸ್ಲಾಂ ಧರ್ಮಕ್ಕೆ ಆಮಂತ್ರಿಸಲಾಗುತ್ತಿದೆ. ಅಕ್ರಮಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
ಅವನೇ ಸನ್ಮಾರ್ಗ ಮತ್ತು ಸತ್ಯಧರ್ಮದೊಂದಿಗೆ ತನ್ನ ಸಂದೇಶವಾಹಕರನ್ನು ಕಳುಹಿಸಿದವನು. ಈ ಧರ್ಮವು ಇತರೆಲ್ಲಾ ಧರ್ಮಗಳ ಮೇಲೆ ಜಯಗಳಿಸುವಂತೆ ಮಾಡುವುದಕ್ಕಾಗಿ. ಬಹುದೇವಾರಾಧಕರು ಎಷ್ಟು ದ್ವೇಷಿಸಿದರೂ ಸಹ.
ನೀವು ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡಿರಿ. ನಿಮ್ಮ ತನು-ಧನಗಳಿಂದ ಅಲ್ಲಾಹನ ಮಾರ್ಗದಲ್ಲಿ ಹೋರಾಡಿರಿ. ನೀವು ತಿಳಿದವರಾಗಿದ್ದರೆ ಅದೇ ನಿಮ್ಮ ಅತ್ಯುತ್ತಮವಾಗಿದೆ.
ಅಲ್ಲಾಹು ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಮತ್ತು ಶಾಶ್ವತ ವಾಸದ ಸ್ವರ್ಗೋದ್ಯಾನಗಳಲ್ಲಿರುವ ಪರಿಶುದ್ಧ ವಸತಿಗಳಿಗೆ ನಿಮ್ಮನ್ನು ಪ್ರವೇಶ ಮಾಡಿಸುವನು. ಅದೇ ಅತಿದೊಡ್ಡ ವಿಜಯ.
ನೀವು ಇಷ್ಟಪಡುವ ಇನ್ನೊಂದು ಅನುಗ್ರಹವನ್ನು ಅವನು ನಿಮಗೆ ದಯಪಾಲಿಸುವನು. ಅದು ಅಲ್ಲಾಹನ ಸಹಾಯ ಮತ್ತು ಹತ್ತಿರದಲ್ಲೇ ಇರುವ ವಿಜಯವಾಗಿದೆ. ಸತ್ಯವಿಶ್ವಾಸಿಗಳಿಗೆ ಸುವಾರ್ತೆಯನ್ನು ತಿಳಿಸಿರಿ.
ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನ ಸಹಾಯಕರಾಗಿರಿ. ಮರ್ಯಮರ ಮಗ ಈಸಾ ಹವಾರಿಗಳೊಡನೆ ಕೇಳಿದಂತೆ: “ಅಲ್ಲಾಹನ ಮಾರ್ಗದಲ್ಲಿ ನನಗೆ ಸಹಾಯಕರಾಗಿ ಯಾರಿದ್ದೀರಿ?” ಹವಾರಿಗಳು ಉತ್ತರಿಸಿದರು: “ನಾವು ಅಲ್ಲಾಹನ ಮಾರ್ಗದಲ್ಲಿ ಸಹಾಯ ಮಾಡುತ್ತೇವೆ.” ನಂತರ ಇಸ್ರಾಯೇಲ್ ಮಕ್ಕಳಲ್ಲಿ ಸೇರಿದ ಒಂದು ಗುಂಪು ವಿಶ್ವಾಸವಿಟ್ಟರೆ ಇನ್ನೊಂದು ಗುಂಪು ನಿಷೇಧಿಸಿತು. ಆಗ ನಾವು ಸತ್ಯವಿಶ್ವಾಸಿಗಳಿಗೆ ಅವರ ವೈರಿಗಳ ವಿರುದ್ಧ ಬೆಂಬಲವನ್ನು ನೀಡಿದೆವು. ತನ್ನಿಮಿತ್ತ ಅವರು ವಿಜಯಿಗಳಾದರು.