ಭೂಮ್ಯಾಕಾಶಗಳಲ್ಲಿರುವ ಎಲ್ಲಾ ವಸ್ತುಗಳನ್ನು ಅಲ್ಲಾಹು ತಿಳಿದಿದ್ದಾನೆಂದು ನೀವು ನೋಡಿಲ್ಲವೇ? ಮೂರು ಜನರು ನಡೆಸುವ ರಹಸ್ಯ ಮಾತುಕತೆಯು ನಾಲ್ಕನೆಯವನಾಗಿ ಅಲ್ಲಾಹು ಇಲ್ಲದಿರುವ ಹೊರತು ಸಂಭವಿಸುವುದಿಲ್ಲ. ಐದು ಜನರು ನಡೆಸುವ ರಹಸ್ಯ ಮಾತುಕತೆಯು ಆರನೆಯವನಾಗಿ ಅಲ್ಲಾಹು ಇಲ್ಲದಿರುವ ಹೊರತು ಸಂಭವಿಸುವುದಿಲ್ಲ. ಅದಕ್ಕಿಂತ ಕಡಿಮೆ ಸಂಖ್ಯೆಯ ಅಥವಾ ಹೆಚ್ಚು ಸಂಖ್ಯೆಯ ಜನರು ನಡೆಸುವ (ರಹಸ್ಯ ಮಾತುಕತೆಯು) ಅವರ ಜೊತೆಗೆ ಅಲ್ಲಾಹು ಇಲ್ಲದಿರುವ ಹೊರತು ಸಂಭವಿಸುವುದಿಲ್ಲ. ಅವರು ಎಲ್ಲೇ ಇದ್ದರೂ ಸಹ. ನಂತರ ಪುನರುತ್ಥಾನ ದಿನದಂದು ಅವರು ಮಾಡಿರುವ ಕರ್ಮಗಳ ಬಗ್ಗೆ ಅವನು ಅವರಿಗೆ ತಿಳಿಸಿಕೊಡುವನು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲ ವಿಷಯಗಳನ್ನು ತಿಳಿದವನಾಗಿದ್ದಾನೆ.