ಓ ಸತ್ಯವಿಶ್ವಾಸಿಗಳೇ! ನೀವು ಸಂದೇಶವಾಹಕರೊಂದಿಗೆ ರಹಸ್ಯ ಮಾತುಕತೆ ನಡೆಸುವುದಾದರೆ ನಿಮ್ಮ ರಹಸ್ಯ ಮಾತುಕತೆಗೆ ಮೊದಲು ದಾನ ಮಾಡಿರಿ. ಅದು ನಿಮಗೆ ಉತ್ತಮವಾಗಿದೆ ಮತ್ತು ಹೆಚ್ಚು ಪರಿಶುದ್ಧವಾಗಿದೆ. ನಿಮಗೆ ದಾನ ಮಾಡಲು ಏನೂ ಸಿಗದಿದ್ದರೆ ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
ರಹಸ್ಯ ಮಾತುಕತೆಗೆ ಮೊದಲು ದಾನ ಮಾಡುವುದರ ಬಗ್ಗೆ ನಿಮಗೆ ಭಯವಾಗುತ್ತಿದೆಯೇ? ನೀವು ಅದನ್ನು ಮಾಡದಿರುವುದರಿಂದ ಮತ್ತು ಅಲ್ಲಾಹು ನಿಮ್ಮನ್ನು ಕ್ಷಮಿಸಿರುವುದರಿಂದ ನೀವು ನಮಾಝ್ ಸಂಸ್ಥಾಪಿಸಿರಿ, ಝಕಾತ್ ನೀಡಿರಿ ಹಾಗೂ ಅಲ್ಲಾಹು ಹಾಗೂ ಅವನ ಸಂದೇಶವಾಹಕರನ್ನು ಅನುಸರಿಸಿರಿ. ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ಸೂಕ್ಷ್ಮಜ್ಞಾನವುಳ್ಳವನಾಗಿದ್ದಾನೆ.
ಅಲ್ಲಾಹನ ಕೋಪಕ್ಕೆ ಪಾತ್ರರಾದ ಜನರೊಡನೆ (ಯಹೂದರೊಡನೆ) ಮೈತ್ರಿ ಮಾಡಿಕೊಂಡವರನ್ನು (ಕಪಟವಿಶ್ವಾಸಿಗಳನ್ನು) ನೀವು ನೋಡಿಲ್ಲವೇ? ಅವರು ನಿಮ್ಮಲ್ಲಿ ಸೇರಿದವರಲ್ಲ. ಅವರಲ್ಲಿ (ಯಹೂದರಲ್ಲಿ) ಸೇರಿದವರೂ ಅಲ್ಲ. ಅವರು ತಿಳಿದವರಾಗಿದ್ದೂ ಸುಳ್ಳಿನ ಆಧಾರದಲ್ಲಿ ಆಣೆ ಮಾಡುತ್ತಾರೆ.
ಅಲ್ಲಾಹು ಅವರೆಲ್ಲರನ್ನೂ ಪುನರುತ್ಥಾನಗೊಳಿಸುವ ದಿನ! ಅವರು ನಿಮ್ಮ ಮುಂದೆ ಆಣೆ ಮಾಡುವಂತೆ ಅಲ್ಲಾಹನ ಮುಂದೆಯೂ ಆಣೆ ಮಾಡುವರು. ಅವರು (ಒಂದು ಆಧಾರದ) ಮೇಲಿದ್ದಾರೆಂದು ಅವರು ಭಾವಿಸುತ್ತಾರೆ. ತಿಳಿಯಿರಿ! ನಿಶ್ಚಯವಾಗಿಯೂ ಅವರೇ ಸುಳ್ಳುಗಾರರು.
ಶೈತಾನನು ಅವರ ಮೇಲೆ ಪ್ರಾಬಲ್ಯ ಪಡೆದಿದ್ದಾನೆ ಮತ್ತು ಅವರು ಅಲ್ಲಾಹನ ಸ್ಮರಣೆಯನ್ನು ಮರೆಯುವಂತೆ ಮಾಡಿದ್ದಾನೆ. ಅವರೇ ಶೈತಾನನ ಪಂಗಡದವರು. ತಿಳಿಯಿರಿ! ನಿಶ್ಚಯವಾಗಿಯೂ ಶೈತಾನನ ಪಂಗಡದವರೇ ನಷ್ಟ ಹೊಂದಿದವರು.