ವಿವಾಹಿತ ಮಹಿಳೆಯರು (ಕೂಡ ನಿಮಗೆ ನಿಷಿದ್ಧವಾಗಿದ್ದಾರೆ). ಆದರೆ ನಿಮ್ಮ ಅಧೀನದಲ್ಲಿರುವ ಗುಲಾಮಸ್ತ್ರೀಯರ ಹೊರತು. ಇವು ಅಲ್ಲಾಹು ಕಡ್ಡಾಯಗೊಳಿಸಿದ ನಿಯಮಗಳಾಗಿವೆ. ಇವರ ಹೊರತಾಗಿರುವ ಎಲ್ಲಾ ಮಹಿಳೆಯರು ನಿಮಗೆ ಧರ್ಮಸಮ್ಮತವಾಗಿದ್ದಾರೆ. ನೀವು ಪರಿಶುದ್ಧ ಜೀವನವನ್ನು ಬಯಸುವವರು ಮತ್ತು ಅನೈತಿಕತೆಯನ್ನು ಬಯಸದವರಾಗಿದ್ದರೆ, ನಿಮ್ಮ ಧನವನ್ನು ನೀಡಿ ಇವರನ್ನು ವಿವಾಹವಾಗಬಹುದು. ನೀವು ಯಾರಿಂದ ಸುಖವನ್ನು ಪಡೆಯಲು ಬಯಸುತ್ತೀರೋ ಅವರಿಗೆ ನಿಶ್ಚಯಿಸಲಾದ ವಧುದಕ್ಷಿಣೆಯನ್ನು (ಮಹರ್) ಕೊಟ್ಟುಬಿಡಿ. ವಧುದಕ್ಷಿಣೆಯನ್ನು ನಿಶ್ಚಯಿಸಲಾದ ಬಳಿಕ ನೀವು ಪರಸ್ಪರ ತೃಪ್ತಿಯಿಂದ ವಿನಾಯಿತಿ ತೋರಿದರೆ ಅದರಲ್ಲಿ ನಿಮಗೆ ದೋಷವಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನೂ ತಿಳಿದವನು ಮತ್ತು ವಿವೇಕಪೂರ್ಣನಾಗಿದ್ದಾನೆ.
ಸತ್ಯವಿಶ್ವಾಸಿಗಳಾದ ಸ್ವತಂತ್ರ ಮಹಿಳೆಯರನ್ನು ವಿವಾಹವಾಗಲು ನಿಮಗೆ ಆರ್ಥಿಕ ಸಾಮರ್ಥ್ಯವಿಲ್ಲದಿದ್ದರೆ, ನಿಮ್ಮ ಅಧೀನದಲ್ಲಿರುವ ಗುಲಾಮಸ್ತ್ರೀಯರಲ್ಲಿ ಒಬ್ಬಳನ್ನು (ಪತ್ನಿಯಾಗಿ ಸ್ವೀಕರಿಸಬಹುದು). ನಿಮ್ಮ ವಿಶ್ವಾಸದ ಬಗ್ಗೆ ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ. ನೀವು ಒಬ್ಬರು ಇನ್ನೊಬ್ಬರಿಂದ ಉಂಟಾಗಿದ್ದೀರಿ. ಅವರ ಯಜಮಾನರ ಒಪ್ಪಿಗೆ ಪಡೆದು ಅವರನ್ನು ವಿವಾಹವಾಗಿರಿ. ಸ್ವೀಕಾರಾರ್ಹ ರೀತಿಯಲ್ಲಿ ಅವರ ವಧುದಕ್ಷಿಣೆಯನ್ನು ಅವರಿಗೆ ಕೊಟ್ಟುಬಿಡಿ. ಅವರು ಪರಿಶುದ್ಧೆಯರಾಗಿರಲಿ; ಅನೈತಿಕ ಸಂಬಂಧವಿರುವವರೋ ಅಥವಾ ರಹಸ್ಯ ಪ್ರೇಮಿಗಳನ್ನು ಹೊಂದಿದವರೋ ಆಗಿರಬಾರದು. ಅವರು ವಿವಾಹಿತೆಯರಾದ ಬಳಿಕ ವೇಶ್ಯಾವೃತ್ತಿ ಮಾಡಿದರೆ, ಸ್ವತಂತ್ರ ಮಹಿಳೆಯರಿಗೆ ನೀಡಲಾಗುವ ಶಿಕ್ಷೆಯ ಅರ್ಧ ಭಾಗವನ್ನು ಅವರಿಗೆ ನೀಡಲಾಗುವುದು. ಇದು (ಗುಲಾಮಸ್ತ್ರೀಯರ ವಿವಾಹ) ನಿಮ್ಮಲ್ಲಿ ಪಾಪವನ್ನು ಭಯಪಡುವವರಿಗೆ ನೀಡಲಾದ ಅನುಮತಿಯಾಗಿದೆ. ನೀವು ತಾಳ್ಮೆಯಿಂದಿದ್ದರೆ ಅದು ನಿಮಗೆ ಒಳಿತಾಗಿದೆ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
ಅಲ್ಲಾಹು ನಿಮಗೆ (ವಿಷಯಗಳನ್ನು) ಸ್ಪಷ್ಟಗೊಳಿಸಲು, ನಿಮ್ಮ (ನೀತಿವಂತ) ಪೂರ್ವಜರ ಚರ್ಯೆಗಳನ್ನು ತೋರಿಸಿಕೊಡಲು ಮತ್ತು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಲು ಬಯಸುತ್ತಾನೆ. ಅಲ್ಲಾಹು ಎಲ್ಲವನ್ನೂ ತಿಳಿದವನು ಮತ್ತು ವಿವೇಕಪೂರ್ಣನಾಗಿದ್ದಾನೆ.