ದುರ್ಬಲರು ಪ್ರಬಲರೊಡನೆ ಹೇಳುವರು: “ಅಲ್ಲ, ವಾಸ್ತವವಾಗಿ ಅದು ನೀವು ಹಗಲು-ರಾತ್ರಿ ಮಾಡುತ್ತಿದ್ದ ಪಿತೂರಿಯ ಫಲವಾಗಿತ್ತು. ನಾವು ಅಲ್ಲಾಹನನ್ನು ನಿಷೇಧಿಸಲು ಮತ್ತು ಅವನಿಗೆ ಸರಿಸಾಟಿಗಳನ್ನು ನಿಶ್ಚಯಿಸಲು ನೀವು ನಮ್ಮೊಂದಿಗೆ ಆದೇಶಿಸುತ್ತಿದ್ದ ಸಂದರ್ಭ(ವನ್ನು ಸ್ಮರಿಸಿ).” ಶಿಕ್ಷೆಯನ್ನು ಕಾಣುವಾಗ ಅವರು ತಮ್ಮ ಹತಾಶೆಯನ್ನು ಮನಸ್ಸಿನಲ್ಲೇ ಮುಚ್ಚಿಡುವರು. ನಾವು ಸತ್ಯನಿಷೇಧಿಗಳ ಕೊರಳುಗಳಲ್ಲಿ ಸಂಕೋಲೆಗಳನ್ನು ಹಾಕುವೆವು. ಅವರು ಮಾಡಿದ ಕರ್ಮಗಳ ಪ್ರತಿಫಲವನ್ನಲ್ಲದೆ ಬೇರೇನಾದರೂ ಅವರಿಗೆ ನೀಡಲಾಗುವುದೇ?
ನಾವು ಯಾವುದೇ ಊರಿಗೆ ಒಬ್ಬ ಮುನ್ನೆಚ್ಚರಿಕೆಗಾರನನ್ನು (ಪ್ರವಾದಿಯನ್ನು) ಕಳುಹಿಸಿದಾಗಲೆಲ್ಲಾ ಅಲ್ಲಿನ ಸಂಪನ್ನರು ಹೇಳುತ್ತಿದ್ದರು: “ನಿಮ್ಮನ್ನು ಯಾವುದರೊಂದಿಗೆ ಕಳುಹಿಸಲಾಗಿದೆಯೋ ಅದನ್ನು ನಾವು ನಿಷೇಧಿಸಿದ್ದೇವೆ.”
ಹೇಳಿರಿ: “ನಿಶ್ಚಯವಾಗಿಯೂ ನನ್ನ ಪರಿಪಾಲಕನು (ಅಲ್ಲಾಹು) ಅವನು ಇಚ್ಛಿಸುವವರಿಗೆ ಉಪಜೀವನವನ್ನು ವಿಶಾಲಗೊಳಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಇಕ್ಕಟ್ಟುಗೊಳಿಸುತ್ತಾನೆ. ಆದರೆ ಜನರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.”
ನಿಮ್ಮ ಆಸ್ತಿ ಅಥವಾ ಮಕ್ಕಳು ನಿಮ್ಮನ್ನು ನಮಗೆ ಹತ್ತಿರಗೊಳಿಸುವುದಿಲ್ಲ. ಆದರೆ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ಅವರು ಮಾಡಿದ ಕರ್ಮಗಳ ಇಮ್ಮಡಿ ಪ್ರತಿಫಲವನ್ನು ನೀಡಲಾಗುವುದು. ಅವರು ಉನ್ನತ ಸೌಧಗಳಲ್ಲಿ ನಿರ್ಭಯವಾಗಿರುವರು.
ಹೇಳಿರಿ: “ನಿಶ್ಚಯವಾಗಿಯೂ ನನ್ನ ಪರಿಪಾಲಕನು (ಅಲ್ಲಾಹು) ಅವನ ದಾಸರಲ್ಲಿ ಅವನು ಇಚ್ಛಿಸುವವರಿಗೆ ಉಪಜೀವನವನ್ನು ವಿಶಾಲಗೊಳಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಇಕ್ಕಟ್ಟುಗೊಳಿಸುತ್ತಾನೆ. ನೀವು ಏನೇ ಖರ್ಚು ಮಾಡಿದರೂ ಅವನು ಅದಕ್ಕೆ ಬದಲಿಯನ್ನು ನೀಡುವನು. ಅವನು ಉಪಜೀವನ ಒದಗಿಸುವವರಲ್ಲಿ ಅತಿಶ್ರೇಷ್ಠನಾಗಿದ್ದಾನೆ.”