ಜನರಲ್ಲಿ ಕೆಲವರಿದ್ದಾರೆ. ಅವರು ಯಾವುದೇ ತಿಳುವಳಿಕೆಯಿಲ್ಲದೆ ಅಲ್ಲಾಹನ ಮಾರ್ಗದಿಂದ ಜನರನ್ನು ತಪ್ಪಿಸಲು ಮತ್ತು ಅದನ್ನು ತಮಾಷೆಯ ವಸ್ತುವನ್ನಾಗಿ ಸ್ವೀಕರಿಸಲು ಮೋಜಿನ ಮಾತುಗಳನ್ನು ಖರೀದಿಸಿ ತರುತ್ತಾರೆ. ಅವರಿಗೆ ಅವಮಾನಕರ ಶಿಕ್ಷೆಯಿದೆ.
ಅವನಿಗೆ ನಮ್ಮ ವಚನಗಳನ್ನು ಓದಿ ಕೊಡಲಾದರೆ ಅವನು ಬೆನ್ನು ತೋರಿಸಿ ಅಹಂಕಾರದಿಂದ ನಡೆಯುತ್ತಾನೆ. ಅವನು ಅದನ್ನು ಕೇಳಿಯೇ ಇಲ್ಲ ಎಂಬಂತೆ. ಅವನ ಕಿವಿಗಳಲ್ಲಿ ಮುಚ್ಚಳವಿರುವಂತೆ. ಅವನಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಸುವಾರ್ತೆಯನ್ನು ನೀಡಿರಿ.
ನೀವು ನೋಡುವ ಯಾವುದೇ ಸ್ಥಂಭಗಳ ಆಧಾರವಿಲ್ಲದೆ ಅವನು ಆಕಾಶಗಳನ್ನು ಸೃಷ್ಟಿಸಿದ್ದಾನೆ. ಭೂಮಿಯು ನಿಮ್ಮೊಂದಿಗೆ ಅಲುಗಾಡದಿರಲು ಅವನು ಅದರಲ್ಲಿ ದೃಢವಾಗಿ ನಿಲ್ಲುವ ಪರ್ವತಗಳನ್ನು ಸ್ಥಾಪಿಸಿದ್ದಾನೆ. ಅವನು ಅದರಲ್ಲಿ ಎಲ್ಲಾ ರೀತಿಯ ಜೀವರಾಶಿಗಳನ್ನು ಹಬ್ಬಿಸಿದ್ದಾನೆ. ನಾವು ಆಕಾಶದಿಂದ ಮಳೆಯನ್ನು ಸುರಿಸಿದೆವು. ನಂತರ ಅದರಲ್ಲಿ ಎಲ್ಲಾ ವಿಧಗಳ ಉತ್ತಮ ಸಸ್ಯವರ್ಗಗಳನ್ನು ಬೆಳೆಸಿದೆವು.
ಇವೆಲ್ಲವೂ ಅಲ್ಲಾಹನ ಸೃಷ್ಟಿಗಳು. ಅವನ ಹೊರತಾಗಿ (ನೀವು ಆರಾಧಿಸುವ ದೇವರುಗಳು) ಏನು ಸೃಷ್ಟಿಸಿದ್ದಾರೆಂದು ನನಗೆ ತೋರಿಸಿಕೊಡಿ. ಅಲ್ಲ, ವಾಸ್ತವವಾಗಿ ಅಕ್ರಮಿಗಳು ಸ್ಪಷ್ಟ ದುರ್ಮಾರ್ಗದಲ್ಲಿದ್ದಾರೆ.