[1] ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದನ್ನು ಪ್ರೋತ್ಸಾಹಿಸುತ್ತಾ, “ಅಲ್ಲಾಹನಿಗೆ ಉತ್ತಮ ಸಾಲವನ್ನು ನೀಡುವವರು ಯಾರು?” ಎಂಬ ವಚನವು ಅವತೀರ್ಣವಾದಾಗ ಯಹೂದಿಗಳು “ಓ ಮುಹಮ್ಮದ್! ನಿಮ್ಮ ದೇವರು ಬಡವನಾಗಿ ಬಿಟ್ಟಿದ್ದಾನೆ. ಅವನು ಅವನ ಸೃಷ್ಟಿಗಳಿಂದ ಹಣ ಕೇಳುತ್ತಿದ್ದಾನೆ.” ಎಂದು ತಮಾಷೆ ಮಾಡತೊಡಗಿದರು. ಆಗ ಈ ವಚನವು ಅವತೀರ್ಣವಾಯಿತು.
[1] ಇಲ್ಲಿ ಯಹೂದಿಗಳು ಹೇಳಿದ ಇನ್ನೊಂದು ಸುಳ್ಳನ್ನು ಕೂಡ ಅನಾವರಣಗೊಳಿಸಲಾಗಿದೆ. ಅದೇನೆಂದರೆ ಅವರು ಹೇಳುತ್ತಿದ್ದರು: “ಒಬ್ಬ ವ್ಯಕ್ತಿ ನಿಮ್ಮ ಬಳಿಗೆ ಬಂದು ಅಲ್ಲಾಹನಲ್ಲಿ ಪ್ರಾರ್ಥಿಸಿದಾಗ ಆಕಾಶದಿಂದ ಬೆಂಕಿ ಸುರಿದು ನೀವು ಅಲ್ಲಾಹನಿಗೆ ಕುರ್ಬಾನಿ ಮಾಡಿದ ಪ್ರಾಣಿಯನ್ನು ಅದು ಭಕ್ಷಿಸಿದರೆ ಮಾತ್ರ ಆ ವ್ಯಕ್ತಿಯನ್ನು ಪ್ರವಾದಿಯೆಂದು ನಂಬಿರಿ. ಇಲ್ಲದಿದ್ದರೆ ನಂಬಬೇಡಿ ಎಂದು ಅಲ್ಲಾಹು ನಮ್ಮೊಡನೆ ಕರಾರು ಪಡೆದಿದ್ದಾನೆ. ನೀವು ಆ ಪವಾಡವನ್ನು ತೋರಿಸಿಲ್ಲ. ಆದ್ದರಿಂದ ನಾವು ನಿಮ್ಮಲ್ಲಿ ವಿಶ್ವಾಸವಿಡುವುದಿಲ್ಲ.” ಆದರೆ ಇದು ಅವರು ಹೇಳುವ ಒಂದು ನೆಪ ಮಾತ್ರ. ಏಕೆಂದರೆ ಇದಕ್ಕಿಂತ ಮೊದಲು ಇಂತಹ ಅನೇಕ ಪವಾಡಗಳನ್ನು ತೋರಿಸಿದ ಪ್ರವಾದಿಗಳನ್ನು ಇವರ ಪೂರ್ವಜರು ತಿರಸ್ಕರಿಸಿದ್ದರು ಮತ್ತು ನಿರ್ದಯವಾಗಿ ಕೊಂದು ಹಾಕಿದ್ದರು.