ಸತ್ಯವಿಶ್ವಾಸಿಗಳೆಂದರೆ ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟವರು ಮಾತ್ರ. ಅವರು (ಮುಸಲ್ಮಾನರ ಹಿತಕ್ಕಾಗಿ) ಸಂದೇಶವಾಹಕರು ಸೇರಿಸಿದ ಸಭೆಯಲ್ಲಿ ಅವರ ಜೊತೆಗಿರುವಾಗ, ಅವರ ಅನುಮತಿಯಿಲ್ಲದೆ ಸಭೆಯಿಂದ ಹೊರಹೋಗುವುದಿಲ್ಲ. (ಪ್ರವಾದಿಯವರೇ) ಯಾರು ನಿಮ್ಮೊಡನೆ ಅನುಮತಿ ಬೇಡುತ್ತಾರೋ ಅವರು ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟವರೇ ಆಗಿದ್ದಾರೆ. ಅವರು ಅವರ ಯಾವುದಾದರೂ ಕೆಲಸಗಳಿಗೆ ಹೋಗಲು ನಿಮ್ಮೊಂದಿಗೆ ಅನುಮತಿ ಕೇಳಿದರೆ, ಅವರಲ್ಲಿ ನೀವು ಇಚ್ಛಿಸುವವರಿಗೆ ಅನುಮತಿ ನೀಡಿರಿ ಮತ್ತು ಅವರಿಗೋಸ್ಕರ ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
ನೀವು ಪರಸ್ಪರ ಒಬ್ಬರನ್ನೊಬ್ಬರು ಕರೆಯುವಂತೆ ಅಲ್ಲಾಹನ ಸಂದೇಶವಾಹಕರನ್ನು ಕರೆಯಬೇಡಿ.[1] ನಿಮ್ಮಲ್ಲಿ ಯಾರಿಗೂ ತಿಳಿಯದಂತೆ ಗುಟ್ಟಾಗಿ (ಪ್ರವಾದಿಯವರ ಸಭೆಯಿಂದ) ತಪ್ಪಿಸಿಕೊಳ್ಳುವವರ (ಕಪಟವಿಶ್ವಾಸಿಗಳ) ಬಗ್ಗೆ ಅಲ್ಲಾಹನಿಗೆ ಬಹಳ ಚೆನ್ನಾಗಿ ತಿಳಿದಿದೆ. ಪ್ರವಾದಿಯವರ ಆಜ್ಞೆಗೆ ವಿರುದ್ಧವಾಗಿ ಸಾಗುವವರು—ಅವರಿಗೇನಾದರೂ ಅನಾಹುತ ಸಂಭವಿಸುವುದರ ಬಗ್ಗೆ ಅಥವಾ ಯಾತನಾಮಯ ಶಿಕ್ಷೆ ಎರಗುವುದರ ಬಗ್ಗೆ ಸದಾ ಭಯಪಡುತ್ತಿರಲಿ.
[1] ಅಂದರೆ ನೀವು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಓ ಮುಹಮ್ಮದ್ ಎಂದು ಕರೆಯಬೇಡಿ. ಬದಲಿಗೆ, ಓ ಪ್ರವಾದಿಯವರೇ, ಓ ಅಲ್ಲಾಹನ ಸಂದೇಶವಾಹಕರೇ ಎಂದು ಕರೆಯಿರಿ.
ತಿಳಿಯಿರಿ! ನಿಶ್ಚಯವಾಗಿಯೂ ಭೂಮ್ಯಾಕಾಶಗಳಲ್ಲಿರುವ ವಸ್ತುಗಳೆಲ್ಲವೂ ಅಲ್ಲಾಹನಿಗೆ ಸೇರಿದ್ದು. ನೀವು ಯಾವ ಮಾರ್ಗದಲ್ಲಿದ್ದೀರಿ ಎಂದು ಅವನಿಗೆ ಬಹಳ ಚೆನ್ನಾಗಿ ತಿಳಿದಿದೆ. ಅವರನ್ನು ಅವನ ಬಳಿಗೆ ಮರಳಿಸಲಾಗುವ ದಿನ ಅವನು ಅವರಿಗೆ ಅವರ ಎಲ್ಲಾ ಕರ್ಮಗಳ ಬಗ್ಗೆ ತಿಳಿಸಿಕೊಡುವನು. ಅಲ್ಲಾಹು ಎಲ್ಲಾ ವಿಷಯಗಳ ಬಗ್ಗೆ ತಿಳಿದವನಾಗಿದ್ದಾನೆ.