ನೀವು ಅದನ್ನು ಕಾಣುವ ದಿನ ಹೇಗಿದೆಯೆಂದರೆ, ಅಂದು ಸ್ತನಪಾನ ಮಾಡುವ ತಾಯಂದಿರು ಸ್ತನ ಚೀಪುವ ಮಗುವನ್ನು ಮರೆಯುವರು, ಗರ್ಭಿಣಿಯರು ತನ್ನ ಗರ್ಭದಲ್ಲಿರುವುದನ್ನು ಹಡೆಯುವರು ಮತ್ತು ಜನರು ನಶೆಯಲ್ಲಿರುವಂತೆ ನಿಮಗೆ ಕಾಣುವರು. ವಾಸ್ತವವಾಗಿ ಅವರು ನಶೆಯಲ್ಲಿಲ್ಲ. ಆದರೆ ಅಲ್ಲಾಹನ ಶಿಕ್ಷೆಯು ಅತಿ ಕಠೋರವಾಗಿದೆ.
ಯಾರು ಅವನನ್ನು (ಶೈತಾನನನ್ನು) ಗೆಳೆಯನಾಗಿ ಸ್ವೀಕರಿಸುತ್ತಾನೋ, ಅವನನ್ನು ಶೈತಾನನು ದಾರಿತಪ್ಪಿಸುತ್ತಾನೆ ಮತ್ತು ಜ್ವಲಿಸುವ ನರಕ ಶಿಕ್ಷೆಗೆ ಒಯ್ಯುತ್ತಾನೆ ಎಂದು ಅವನ ಬಗ್ಗೆ ಲಿಖಿತಗೊಳಿಸಲಾಗಿದೆ.
ಮನುಷ್ಯರೇ! ಪುನರುತ್ಥಾನದ ಬಗ್ಗೆ ನಿಮಗೆ ಸಂಶಯವಿದ್ದರೆ (ಆಲೋಚಿಸಿ ನೋಡಿ). ನಿಶ್ಚಯವಾಗಿಯೂ, ನಾವು ನಿಮ್ಮನ್ನು ಮಣ್ಣಿನಿಂದ, ನಂತರ ವೀರ್ಯದಿಂದ, ನಂತರ ರಕ್ತಪಿಂಡದಿಂದ, ನಂತರ ರೂಪ ನೀಡಲಾದ ಮತ್ತು ರೂಪ ನೀಡಲ್ಪಡದ ಮಾಂಸ ಮುದ್ದೆಯಿಂದ ಸೃಷ್ಟಿಸಿದೆವು. ನಾವು ಇದನ್ನು ನಿಮಗೆ ವಿವರಿಸಿಕೊಡುತ್ತಿದ್ದೇವೆ. ನಂತರ ನಾವು ಇಚ್ಛಿಸುವ ನಿಶ್ಚಿತ ಅವಧಿಯ ತನಕ ಅದನ್ನು ಗರ್ಭಾಶಯಗಳಲ್ಲಿ ಇಡುತ್ತೇವೆ. ನಂತರ ನಿಮ್ಮನ್ನು ಶಿಶುವಿನ ರೂಪದಲ್ಲಿ ಹೊರತರುತ್ತೇವೆ. ನೀವು ನಿಮ್ಮ ಪೂರ್ಣ ಯೌವನವನ್ನು ತಲುಪುವುದಕ್ಕಾಗಿ. ನಿಮ್ಮಲ್ಲಿ ಕೆಲವರು ನಿಧನರಾಗುತ್ತಾರೆ. ಕೆಲವರು ಅನೇಕ ವಿಷಯಗಳನ್ನು ತಿಳಿದುಕೊಂಡ ಬಳಿಕವೂ ಏನೂ ತಿಳಿಯದ ಅವಸ್ಥೆಗೆ ತಲುಪುವ ರೀತಿಯಲ್ಲಿ ಹಣ್ಣು ಹಣ್ಣು ಮುದುಕರಾಗುವ ಪ್ರಾಯಕ್ಕೆ ಮರಳಿಸಲ್ಪಡುತ್ತಾರೆ. ಭೂಮಿಯು ಒಣಗಿ ನಿರ್ಜೀವವಾಗಿರುವುದನ್ನು ನೀವು ಕಾಣುವಿರಿ. ನಂತರ ನಾವು ಅದರ ಮೇಲೆ ಮಳೆಯನ್ನು ಸುರಿಸಿದಾಗ, ಅದು ಮೈಗೊಡವಿ ಎದ್ದು ಬೆಳವಣಿಗೆ ಪಡೆಯುತ್ತದೆ ಮತ್ತು ಅಪ್ಯಾಯಮಾನವಾದ ಎಲ್ಲಾ ರೀತಿಯ ಸಸ್ಯಗಳನ್ನು ಉತ್ಪಾದಿಸುತ್ತದೆ.