[1] ಇಸ್ರಾಯೇಲ್ ಮಕ್ಕಳು ಫರೋಹನ ಸೈನ್ಯದಿಂದ ಪಾರಾಗಿ ಸೀನಾ ತಪ್ಪಲಿಗೆ ಬಂದು ನೆಲೆಸಿದರು. ಅಲ್ಲಿ ಅಲ್ಲಾಹನ ವಾಗ್ದಾನದಂತೆ ಮೂಸಾ (ಅವರ ಮೇಲೆ ಶಾಂತಿಯಿರಲಿ) ತೌರಾತ್ (ತೋರ) ಪಡೆಯಲು ನಲ್ವತ್ತು ದಿನ ತೂರ್ ಪರ್ವತಕ್ಕೆ ಹೋಗಿ ನೆಲೆಸಿದರು. ಮೂಸಾರ (ಅವರ ಮೇಲೆ ಶಾಂತಿಯಿರಲಿ) ನಿರ್ಗಮನದ ನಂತರ ಇಸ್ರಾಯೇಲ್ ಮಕ್ಕಳು ಸಾಮಿರಿ ಎಂಬಾತನ ಆದೇಶದಂತೆ ಕರುವಿನ ವಿಗ್ರಹವನ್ನು ಪೂಜಿಸತೊಡಗಿದರು.
[1] ಇಸ್ರಾಯೇಲ್ ಮಕ್ಕಳು ಮಾಡಿದ ಬಹುದೇವಾರಾಧನೆಗಾಗಿ ಮೂಸಾ (ಅವರ ಮೇಲೆ ಶಾಂತಿಯಿರಲಿ) ಅವರಿಗೆ ಛೀಮಾರಿ ಹಾಕಿದಾಗ ಅವರು ವಿಷಾದಿಸಿ ಪಶ್ಚಾತ್ತಾಪಪಡಲು ಮುಂದಾದರು. ಅವರು ಮಾಡಿದ ಪಾಪಕ್ಕೆ ಪರಿಹಾರವು ಅವರನ್ನೇ ಅವರು ಕೊಲ್ಲುವುದಾಗಿತ್ತು. ಇದನ್ನು ಎರಡು ರೀತಿಯಲ್ಲಿ ವಿವರಿಸಲಾಗಿದೆ: ಒಂದು, ಅವರನ್ನು ಎರಡು ಸಾಲುಗಳಾಗಿ ನಿಲ್ಲಿಸಿ ಒಬ್ಬರು ಇನ್ನೊಬ್ಬರನ್ನು ಕೊಲ್ಲಬೇಕೆಂದು ಆದೇಶಿಸಲಾಯಿತು. ಎರಡು, ಅವರಲ್ಲಿ ಈ ಪಾಪ ಮಾಡಿದವರನ್ನು ಪಾಪ ಮಾಡದವರು ಕೊಲ್ಲಬೇಕೆಂದು ಆದೇಶಿಸಲಾಯಿತು.
[1] ಮೂಸಾ (ಅವರ ಮೇಲೆ ಶಾಂತಿಯಿರಲಿ) ತೂರ್ ಪರ್ವತಕ್ಕೆ ಹೋಗುವಾಗ 70 ಮಂದಿಯನ್ನು ಕರೆದೊಯ್ದಿದ್ದರು. ಹಿಂದಿರುಗಿ ಬರುವಾಗ ಅವರು ಹೇಳಿದರು: "ಓ ಮೂಸಾ! ಅಲ್ಲಾಹನನ್ನು ನಮ್ಮ ಕಣ್ಣ ಮುಂದೆ ನೇರವಾಗಿ ನೋಡುವ ತನಕ ನಿಮ್ಮ ಮಾತಿನಲ್ಲಿ ನಾವು ನಂಬಿಕೆಯಿಡುವುದಿಲ್ಲ." ಆಗ ಇದ್ದಕ್ಕಿದ್ದಂತೆ ಆಕಾಶದಲ್ಲಿ ಮಿಂಚು ಗೋಚರವಾಗಿ ಅದು ಅವರ ಮೇಲೆ ಬಿದ್ದು ಅವರೆಲ್ಲರೂ ಸತ್ತರು. ಇದರಿಂದ ಮೂಸಾ (ಅವರ ಮೇಲೆ ಶಾಂತಿಯಿರಲಿ) ತುಂಬಾ ದುಃಖಿತರಾದರು. ನಂತರ ಅವರ ಪ್ರಾರ್ಥನೆಗೆ ಉತ್ತರವಾಗಿ ಅಲ್ಲಾಹು ಅವರನ್ನು ಜೀವಂತಗೊಳಿಸಿದನು.
[1] ಮನ್ನ ಎಂದರೆ ಕೆಲವರ ಅಭಿಪ್ರಾಯ ಪ್ರಕಾರ ತರಂಜಬೀನ್ ಎಂಬ ಹೆಸರಿನ ಅಂಟು ತಿನಿಸು. ಇದು ಒಂಟೆಮುಳ್ಳು ಎಂಬ ಸಸ್ಯದ ಎಲೆ ಮತ್ತು ಕಾಂಡಗಳಲ್ಲಿ ಉತ್ಪಾದನೆಯಾಗುವ ರಾಳದಂತಹ ಸಿಹಿವಸ್ತುವಾಗಿದೆ. ಮನ್ನ ಎಂದರೆ ಮರ ಹಾಗೂ ಬಂಡೆಗಳ ಮೇಲೆ ಬೀಳುವ ಇಬ್ಬನಿಯೆಂದು ಕೆಲವರು ಹೇಳಿದ್ದಾರೆ. ಇದು ಜೇನಿನಂತೆ ಸಿಹಿಯಾಗಿರುತ್ತದೆ ಮತ್ತು ಒಣಗಿದಾಗ ಮೇಣದಂತಾಗುತ್ತದೆ. ಕೆಲವರು ಮನ್ನ ಎಂದರೆ ಜೇನು ಅಥವಾ ಸಿಹಿನೀರು ಎಂದಿದ್ದಾರೆ. ಸಲ್ವಾ ಎಂದರೆ ಲಾವಕ್ಕಿ ಅಥವಾ ಗುಬ್ಬಚ್ಚಿಯಂತಹ ಸಣ್ಣ ಹಕ್ಕಿಯಾಗಿದ್ದು ಇದನ್ನು ಕೊಯ್ದು ತಿನ್ನುತ್ತಾರೆ.