ಅಲ್ಲಾಹು ಒಂದು ಉದಾಹರಣೆಯನ್ನು ಕೊಡುತ್ತಾನೆ. ಇನ್ನೊಬ್ಬನ ಅಧೀನದಲ್ಲಿರುವ ಒಬ್ಬ ಗುಲಾಮ. ಅವನಿಗೆ (ಸ್ವಯಂ) ಏನೂ ಮಾಡುವ ಸಾಮರ್ಥ್ಯವಿಲ್ಲ. ಅದೇ ರೀತಿ, ನಾವು ಅತ್ಯುತ್ತಮ ಉಪಜೀವನವನ್ನು ದಯಪಾಲಿಸಿದ ಇನ್ನೊಬ್ಬ ವ್ಯಕ್ತಿ. ಅವನು ಅದರಿಂದ ರಹಸ್ಯವಾಗಿಯೂ ಬಹಿರಂಗವಾಗಿಯೂ ಖರ್ಚು ಮಾಡುತ್ತಾನೆ. ಇವರು ಸಮಾನರಾಗುವರೇ?[1] ಅಲ್ಲಾಹನಿಗೆ ಸರ್ವಸ್ತುತಿ. ವಾಸ್ತವವಾಗಿ, ಅವರಲ್ಲಿ ಹೆಚ್ಚಿನವರೂ ತಿಳಿಯುವುದಿಲ್ಲ.
[1] ಮೊದಲನೆಯವನು ಒಬ್ಬ ಗುಲಾಮ ಮತ್ತು ಎರಡನೆಯವನು ಸ್ವತಂತ್ರ ವ್ಯಕ್ತಿ. ಇವರಿಬ್ಬರೂ ಮನುಷ್ಯರು. ಇವರು ಅನೇಕ ಗುಣಗಳನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ. ಆದರೂ ನೀವು ಇವರಿಬ್ಬರನ್ನು ಸಮಾನರೆಂದು ಪರಿಗಣಿಸುವುದಿಲ್ಲ. ಹೀಗಿರುವಾಗ ನಿಮ್ಮ ದೇವರುಗಳನ್ನು ಅಥವಾ ಸಮಾಧಿಯಲ್ಲಿರುವ ಮಹಾಪುರುಷರನ್ನು ನೀವು ಅಲ್ಲಾಹನಿಗೆ ಸಮಾನರೆಂದು ಹೇಗೆ ಕಲ್ಪಿಸಿಕೊಳ್ಳುತ್ತೀರಿ?
ಅಲ್ಲಾಹು ಇನ್ನೊಂದು ಉದಾಹರಣೆಯನ್ನು ಕೊಡುತ್ತಾನೆ. ಇಬ್ಬರು ವ್ಯಕ್ತಿಗಳಿದ್ದು ಅವರಲ್ಲೊಬ್ಬನು ಮೂಕ. ಅವನಿಗೆ ಏನೂ ಮಾಡುವ ಸಾಮರ್ಥ್ಯವಿಲ್ಲ. ಅವನ ಯಜಮಾನನಿಗೆ ಅವನೊಂದು ಹೊರೆಯಾಗಿದ್ದಾನೆ. ಅವನನ್ನು ಎಲ್ಲಿಗೆ ಕಳುಹಿಸಿದರೂ ಅವನು ಯಾವುದೇ ಒಳಿತನ್ನು ತರುವುದಿಲ್ಲ. ಇವನು ಮತ್ತು ನೇರಮಾರ್ಗದಲ್ಲಿದ್ದು ನ್ಯಾಯವನ್ನು ಆದೇಶಿಸುವ ವ್ಯಕ್ತಿ ಸಮಾನರಾಗುವರೇ?
ಭೂಮ್ಯಾಕಾಶಗಳ ಅದೃಶ್ಯಗಳೆಲ್ಲವೂ ಅಲ್ಲಾಹನಿಗೆ ಸೇರಿದ್ದು. ಅಂತ್ಯ ಸಮಯದ ಆಜ್ಞೆಯು ಕಣ್ಣೆವೆಯಿಕ್ಕುವಂತೆ ಅಥವಾ ಅದಕ್ಕಿಂತಲೂ ಹತ್ತಿರವಾಗಿದೆ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
ಅಲ್ಲಾಹು ನಿಮ್ಮನ್ನು ನಿಮ್ಮ ತಾಯಂದಿರ ಉದರಗಳಿಂದ ಹೊರತಂದನು. ಆಗ ನಿಮಗೆ ಏನೂ ತಿಳಿದಿರಲಿಲ್ಲ. ಅವನು ನಿಮಗೆ ಕಿವಿ, ಕಣ್ಣು ಮತ್ತು ಹೃದಯಗಳನ್ನು ನೀಡಿದನು. ನೀವು ಕೃತಜ್ಞರಾಗುವುದಕ್ಕಾಗಿ.
ವಾಯುಮಂಡಲದಲ್ಲಿ ಅಲ್ಲಾಹನ ಆಜ್ಞೆಗೆ ವಿಧೇಯವಾಗಿ ಹಾರಾಡುವ ಹಕ್ಕಿಗಳನ್ನು ಅವರು ನೋಡಿಲ್ಲವೇ? ಅಲ್ಲಾಹನ ಹೊರತು ಯಾರೂ ಅವುಗಳನ್ನು ಆಧರಿಸಿ ಹಿಡಿಯುವುದಿಲ್ಲ. ನಿಶ್ಚಯವಾಗಿಯೂ ವಿಶ್ವಾಸವಿಡುವ ಜನರಿಗೆ ಇದರಲ್ಲಿ ದೃಷ್ಟಾಂತಗಳಿವೆ.