ನೀವು ಅವನೊಂದಿಗೆ ಕೇಳಿದ್ದೆಲ್ಲವನ್ನೂ ಅವನು ನಿಮಗೆ ನೀಡಿದನು. ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಸತೊಡಗಿದರೆ ಅವುಗಳನ್ನು ಲೆಕ್ಕ ಮಾಡಲು ನಿಮಗೆ ಸಾಧ್ಯವಿಲ್ಲ. ಮನುಷ್ಯನು ನಿಜಕ್ಕೂ ಕಡು ಅಕ್ರಮಿ ಮತ್ತು ಕೃತಘ್ನನಾಗಿದ್ದಾನೆ.
ಇಬ್ರಾಹೀಮ್ ಪ್ರಾರ್ಥಿಸಿದ ಸಂದರ್ಭ(ವನ್ನು ಸ್ಮರಿಸಿ): “ಓ ನನ್ನ ಪರಿಪಾಲಕನೇ! ಈ ನಗರವನ್ನು (ಮಕ್ಕಾ) ನಿರ್ಭಯವಾಗಿ ಮಾಡು ಮತ್ತು ನನ್ನನ್ನು ಹಾಗೂ ನನ್ನ ಮಕ್ಕಳನ್ನು ವಿಗ್ರಹಾರಾಧನೆ ಮಾಡುವುದರಿಂದ ದೂರವಿರಿಸು.
ಓ ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ, ಅವು ಜನರಲ್ಲಿ ಹೆಚ್ಚಿನವರನ್ನು ದಾರಿತಪ್ಪಿಸಿವೆ. ಆದ್ದರಿಂದ ಯಾರು ನನ್ನನ್ನು ಹಿಂಬಾಲಿಸುತ್ತಾನೋ ಅವನು ನನ್ನವನು. ಯಾರು ನನಗೆ ಅವಿಧೇಯತೆ ತೋರುತ್ತಾನೋ—ನಿಶ್ಚಯವಾಗಿಯೂ ನೀನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿರುವೆ.
ಓ ನಮ್ಮ ಪರಿಪಾಲಕನೇ! ನಾನು ನನ್ನ ಮಕ್ಕಳಲ್ಲಿ ಕೆಲವರನ್ನು ಹೊಲಗಳಿಲ್ಲದ ಈ ಕಣಿವೆಯಲ್ಲಿ ನಿನ್ನ ಪವಿತ್ರ ಭವನದ ಬಳಿ ವಾಸ ಮಾಡಿಸಿದ್ದೇನೆ. ಓ ನಮ್ಮ ಪರಿಪಾಲಕನೇ! ಅವರು ನಮಾಝ್ ಸಂಸ್ಥಾಪಿಸುವುದಕ್ಕಾಗಿ. ಆದ್ದರಿಂದ ಜನರಲ್ಲಿ ಕೆಲವರ ಹೃದಯಗಳು ಅವರ ಕಡೆಗೆ ಒಲಿಯುವಂತೆ ಮಾಡು. ಅವರ ಉಪಜೀವನಕ್ಕಾಗಿ ಹಣ್ಣು-ಹಂಪಲುಗಳನ್ನು ನೀಡು. ಅವರು ಕೃತಜ್ಞರಾಗಲೂಬಹುದು.[1]
[1] ಇಬ್ರಾಹೀಂ (ಅವರ ಮೇಲೆ ಶಾಂತಿಯಿರಲಿ) ರವರು ಪತ್ನಿ ಹಾಜರ ಮತ್ತು ಪುತ್ರ ಇಸ್ಮಾಈಲರನ್ನು ಮಕ್ಕಾದ ನಿರ್ಜನ ಕಣಿವೆಯಲ್ಲಿ ಬಿಟ್ಟು ಹೊರಟುಹೋದರು. ಹೋಗುವಾಗ ಅವರು ಈ ಪ್ರಾರ್ಥನೆಯನ್ನು ಪ್ರಾರ್ಥಿಸಿದರು. ಅಲ್ಲಾಹು ಅವರ ಪ್ರಾರ್ಥನೆಯನ್ನು ಸ್ವೀಕರಿಸಿದನು. ಮುಂದೆ ಮಕ್ಕಾ ಎಲ್ಲಾ ರೀತಿಯ ಹಣ್ಣು-ಹಂಪಲುಗಳು ದೊರೆಯುವ ಒಂದು ಜನನಿಬಿಡ ಪ್ರದೇಶವಾಗಿ ಮಾರ್ಪಟ್ಟಿತು.
ಅಕ್ರಮಿಗಳು ಮಾಡುವ ದುಷ್ಕರ್ಮಗಳನ್ನು ಅಲ್ಲಾಹು ಗಮನಿಸುತ್ತಿಲ್ಲ ಎಂದು ನೀವು ಎಂದಿಗೂ ಭಾವಿಸಬೇಡಿ. ಅವನು ಅವರ ವಿಚಾರಣೆಯನ್ನು ವಿಳಂಬ ಮಾಡುವುದು ಕಣ್ಣುಗಳು ಭಯದಿಂದ ದುರುಗುಟ್ಟಿ ನೋಡುವ ದಿನದವರೆಗೆ ಮಾತ್ರ.