[1] ಅಲ್ಲಾಹನನ್ನು ಬಿಟ್ಟು ಇತರ ದೇವರುಗಳನ್ನು ಕರೆದು ಪ್ರಾರ್ಥಿಸುವವರ ಸ್ಥಿತಿಯು ನೀರಿನ ಕಡೆಗೆ ತನ್ನ ಎರಡು ಕೈಗಳನ್ನು ಚಾಚಿ ಅದು ತನ್ನ ಬಾಯಿಗೆ ಬರಬೇಕೆಂದು ಬೇಡಿಕೊಳ್ಳುವವನಂತೆ. ನೀರಿಗೆ ಈತನ ಬೇಡಿಕೆಯೇನೆಂದು ತಿಳಿದಿಲ್ಲ. ಅವನು ತನ್ನೊಡನೆ ಬಾಯಿಗೆ ತಲುಪಬೇಕೆಂದು ಬೇಡುತ್ತಿದ್ದಾನೆಂದೂ ಅದಕ್ಕೆ ತಿಳಿದಿಲ್ಲ. ಅವನ ಬಾಯಿಗೆ ತಲುಪುವ ಶಕ್ತಿಯೂ ಅದಕ್ಕಿಲ್ಲ. ಅದೇ ರೀತಿ ಇವರು ಕರೆದು ಪ್ರಾರ್ಥಿಸುತ್ತಿರುವ ದೇವರುಗಳಿಗೂ ಇವರು ತಮ್ಮನ್ನು ಕರೆದು ಪ್ರಾರ್ಥಿಸುತ್ತಿದ್ದಾರೆಂದು ತಿಳಿದಿಲ್ಲ. ಅವರ ಬೇಡಿಕೆಯೇನೆಂದೂ ತಿಳಿದಿಲ್ಲ. ಆ ಬೇಡಿಕೆಯನ್ನು ಈಡೇರಿಸಿಕೊಡುವ ಶಕ್ತಿಯೂ ಅವರಿಗಿಲ್ಲ.
[1] ಸೃಷ್ಟಿಕರ್ತನು ಏಕೈಕ ದೇವನಾದ ಅಲ್ಲಾಹು ಮಾತ್ರ. ಇದನ್ನು ಬಹುದೇವವಿಶ್ವಾಸಿಗಳು ಕೂಡ ಒಪ್ಪಿಕೊಳ್ಳುತ್ತಾರೆ. ಒಂದು ವೇಳೆ ಅಲ್ಲಾಹನ ಹೊರತಾಗಿ ಬೇರೆ ಸೃಷ್ಟಿಕರ್ತನು ಇರುತ್ತಿದ್ದರೆ, ಇಬ್ಬರ ಸೃಷ್ಟಿಗಳು ಬೇರೆ ಬೇರೆಯಾಗಿಯೇ ಇರುತ್ತಿದ್ದವು. ಜಗತ್ತಿನಲ್ಲಿರುವ ಸೃಷ್ಟಿಗಳಲ್ಲಿ ಇಂತಹ ಯಾವುದೇ ವಿರೋಧಾಭಾಸ ನಮಗೆ ಕಂಡುಬರುವುದಿಲ್ಲವಾದ್ದರಿಂದ ಇಬ್ಬರು ಸೃಷ್ಟಿಕರ್ತರೂ ಸ್ವಲ್ಪವೂ ವ್ಯತ್ಯಾಸವಿಲ್ಲದೆ ಒಂದೇ ರೀತಿಯಲ್ಲಿ ಸೃಷ್ಟಿಸುತ್ತಿದ್ದಾರೆಂದು ಹೇಳಬೇಕಾಗುತ್ತದೆ. ಇದು ಅಸಂಭವ್ಯವಾಗಿದೆ.
[1] ನೀರು ಹರಿಯುವಾಗ ಅದರ ಮೇಲೆ ನೊರೆಗಳು ಉಂಟಾಗುತ್ತವೆ. ಈ ನೊರೆಗಳು ಶಾಶ್ವತವಾಗಿ ಉಳಿಯುವುದಿಲ್ಲ. ಹಾಗೆಯೇ ಆಭರಣಗಳನ್ನು ತಯಾರಿಸಲು ಚಿನ್ನ-ಬೆಳ್ಳಿಗಳನ್ನು ಅಥವಾ ಉಪಕರಣಗಳನ್ನು ತಯಾರಿಸಲು ಹಿತ್ತಾಳೆ-ಕಂಚುಗಳನ್ನು ಕಾಯಿಸುವಾಗ ಅವುಗಳಿಂದಲೂ ನೊರೆಗಳು ಏಳುತ್ತವೆ. ಇವು ಕೂಡ ಶಾಶ್ವತವಾಗಿ ಉಳಿಯುವುದಿಲ್ಲ. ಇವುಗಳಿಂದ ಮನುಷ್ಯರಿಗೆ ಪ್ರಯೋಜನವೂ ಇಲ್ಲ. ಆದರೆ ನೀರು, ಚಿನ್ನ, ಬೆಳ್ಳಿ, ಹಿತ್ತಾಳೆ, ಕಂಚು ಮೊದಲಾದವುಗಳು ಬಾಕಿಯುಳಿಯುತ್ತವೆ ಮತ್ತು ಅವರು ಮನುಷ್ಯರಿಗೆ ಪ್ರಯೋಜನಕಾರಿಯಾಗಿವೆ. ಅಸತ್ಯವು ನೊರೆಯಂತೆ, ಅದು ಶಾಶ್ವತವಾಗಿ ಉಳಿಯುವುದಿಲ್ಲ. ಸತ್ಯವು ನೀರು, ಚಿನ್ನ, ಬೆಳ್ಳಿ ಮುಂತಾದವುಗಳಂತೆ, ಅವು ಶಾಶ್ವತವಾಗಿ ಉಳಿಯುತ್ತವೆ ಮತ್ತು ಅವುಗಳಿಂದ ಮನುಷ್ಯರಿಗೆ ಪ್ರಯೋಜನಗಳಿವೆ.