[1] ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೊಟ್ಟಮೊದಲು ಸೂರ ಅಲಕ್‌ನ ಪ್ರಥಮ 5 ವಚನಗಳು ಅವತೀರ್ಣವಾದವು. ನಂತರ ದೀರ್ಘ ಸಮಯದ ತನಕ ಅವರಿಗೆ ಕುರ್‌ಆನ್ ಅವತೀರ್ಣವಾಗಲಿಲ್ಲ. ಒಂದಿನ ಇದ್ದಕ್ಕಿದ್ದಂತೆ ಹಿರಾ ಗುಹೆಯಲ್ಲಿ ನೋಡಿದ ಅದೇ ದೇವದೂತರು ಆಕಾಶ ಮತ್ತು ಭೂಮಿಯ ಮಧ್ಯೆ ಸಂಪೂರ್ಣ ದಿಗಂತವನ್ನು ಮುಚ್ಚುವ ರೀತಿಯಲ್ಲಿ ಕುಳಿತಿರುವುದನ್ನು ಕಂಡರು. ಅವರು ಭಯದಿಂದ ಮನೆಗೆ ಓಡಿ ನನ್ನನ್ನು ಹೊದಿಯಿರಿ; ನನ್ನನ್ನು ಹೊದಿಯಿರಿ ಎಂದರು. ಅವರನ್ನು ಹೊದಿಕೆಯಿಂದ ಹೊದಿಯಲಾಯಿತು. ಆಗ ಈ ವಚನಗಳು ಅವತೀರ್ಣವಾದವು.
[1] ಅಂದರೆ ಅವನ ವಿಷಯವನ್ನು ನಾನು ನೋಡಿಕೊಳ್ಳುವೆನು. ಅವನು ಅವನ ತಾಯಿಯ ಹೊಟ್ಟೆಯಿಂದ ಹೊರಬರುವಾಗ ಅವನಲ್ಲಿ ಐಶ್ವರ್ಯ ಅಥವಾ ಮಕ್ಕಳಿರಲಿಲ್ಲ. ಇವೆಲ್ಲವೂ ನಾನು ಅವನಿಗೆ ನೀಡಿದ ಅನುಗ್ರಹಗಳು. ಆದರೂ ಅವನು ಈಗ ನನ್ನ ವಿರುದ್ಧ ಸೆಟೆದು ನಿಂತಿದ್ದಾನೆ. — ಇಲ್ಲಿ ಹೇಳಲಾಗಿರುವುದು ಕುರೈಷಿ ಮುಖಂಡ ವಲೀದ್ ಬಿನ್ ಮುಗೀರ ಎಂಬವನ ಬಗ್ಗೆಯಾಗಿದೆ.
[1] ನರಕದ ಕಾವಲುಗಾರರ ಸಂಖ್ಯೆ 19 ಎಂಬ ವಚನ ಅವತೀರ್ಣವಾದಾಗ, ಸತ್ಯನಿಷೇಧಿಗಳ ಮುಖಂಡ ಅಬೂಜಹಲ್ ತನ್ನ ಜನರನ್ನು ಕರೆದು ವ್ಯಂಗ್ಯವಾಗಿ ಹೇಳಿದ: ನಿಮ್ಮಲ್ಲಿ ಪ್ರತಿ ಹತ್ತು ಜನರಿಗೆ ಒಬ್ಬೊಬ್ಬ ದೇವದೂತನನ್ನು ಸೋಲಿಸಲು ಸಾಧ್ಯವಿಲ್ಲವೇ? ಆಗ ಈ ವಚನವು ಅವತೀರ್ಣವಾಯಿತು.
[2] ಈ ವಿಷಯವು ತೌರಾತ್ ಮತ್ತು ಇಂಜೀಲ್‌ನಲ್ಲಿ ಕೂಡ ಇರುವುದರಿಂದ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದ್ದು ಸತ್ಯವೆಂದು ಗ್ರಂಥದವರಿಗೆ ದೃಢವಿಶ್ವಾಸ ಉಂಟಾಗಲಿದೆ.