[1] ಹುದೈಬಿಯಾ ಒಪ್ಪಂದದ ಬಳಿಕ ಮಕ್ಕಾದ ಸತ್ಯನಿಷೇಧಿಗಳು ಒಪ್ಪಂದವನ್ನು ಉಲ್ಲಂಘಿಸಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ವಿರುದ್ಧ ಯುದ್ಧದ ತಯಾರಿ ನಡೆಸಿದರು. ಪ್ರವಾದಿಯ ಅನುಯಾಯಿಗಳಲ್ಲಿ ಒಬ್ಬರಾಗಿದ್ದ ಹಾತಿಬ್ ಬಿನ್ ಅಬೂ ಸಅಲಬ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಮಕ್ಕಾದಿಂದ ಹಿಜ್ರ (ವಲಸೆ) ಮಾಡಿದ ಸಹಾಬಿಯಾಗಿದ್ದರು. ಇವರು ಬದ್ರ್ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಇವರಿಗೆ ಮಕ್ಕಾದ ಕುರೈಶರೊಡನೆ ಯಾವುದೇ ಸಂಬಂಧವಿರದಿದ್ದರೂ, ಇವರ ಮಡದಿ ಮಕ್ಕಳು ಮಕ್ಕಾದಲ್ಲಿದ್ದರು. ಮಕ್ಕಾದ ಸತ್ಯನಿಷೇಧಿಗಳು ತನ್ನ ಮಡದಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂಬ ಉದ್ದೇಶದಿಂದ ಅವರು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯುದ್ಧದ ತಯಾರಿ ನಡೆಸುವ ಸುದ್ದಿಯನ್ನು ರಹಸ್ಯವಾಗಿ ಮಕ್ಕಾದ ಸತ್ಯನಿಷೇಧಿಗಳಿಗೆ ತಿಳಿಸಿದರು. ಇದಕ್ಕಾಗಿ ಅವರು ಒಬ್ಬ ಮಹಿಳೆಯನ್ನು ಗೊತ್ತುಪಡಿಸಿ ಆಕೆಯೊಡನೆ ಮಕ್ಕಾದವರಿಗೆ ಒಂದು ಪತ್ರವನ್ನು ಕಳುಹಿಸಿದರು. ಈ ವಿಷಯ ದೇವವಾಣಿಯ ಮೂಲಕ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಯಿತು. ಅವರು ಸಹಾಬಿಗಳನ್ನು ಕಳುಹಿಸಿ ಆ ಮಹಿಳೆಯಿಂದ ಪತ್ರವನ್ನು ಕಿತ್ತುಕೊಂಡು ಬರುವಂತೆ ಹೇಳಿದರು. ನಂತರ ಹಾತಿಬ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ರನ್ನು ವಿಚಾರಿಸಿದರು. ಹಾತಿಬ್ ತನ್ನ ಪ್ರಾಮಾಣಿಕ ಉದ್ದೇಶವನ್ನು ಮುಚ್ಚುಮರೆಯಿಲ್ಲದೆ ವಿವರಿಸಿದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು ಕ್ಷಮಿಸಿದರು. ಮುಂದೆ ಸತ್ಯವಿಶ್ವಾಸಿಗಳಲ್ಲಿ ಯಾರೂ ಇಂತಹ ಕೆಲಸ ಮಾಡಬಾರದೆಂಬ ಉದ್ದೇಶದಿಂದ ಅಲ್ಲಾಹು ಈ ವಚನಗಳನ್ನು ಅವತೀರ್ಣಗೊಳಿಸಿದನು.
[1] ಅಂದರೆ “ನಾನು ನಿಮಗೋಸ್ಕರ ಅಲ್ಲಾಹನಲ್ಲಿ ಖಂಡಿತ ಕ್ಷಮೆಯಾಚಿಸುತ್ತೇನೆ” ಎಂದು ಇಬ್ರಾಹೀಮರು (ಅವರ ಮೇಲೆ ಶಾಂತಿಯಿರಲಿ) ಹೇಳಿದ ಮಾತಿನಲ್ಲಿ ಸತ್ಯವಿಶ್ವಾಸಿಗಳಿಗೆ ಮಾದರಿಯಿಲ್ಲ.
[1] ಅಂದರೆ ಅವರು ಮುಸ್ಲಿಮರಾಗುವಂತೆ ಮಾಡಲು ಅಲ್ಲಾಹನಿಗೆ ಸಾಧ್ಯವಿದೆ. ಮಕ್ಕಾ ವಿಜಯದ ನಂತರ ಇದು ಸತ್ಯವಾಯಿತು. ಮುಸ್ಲಿಮರ ವೈರಿಗಳಾಗಿದ್ದವರು ತಂಡೋಪತಂಡವಾಗಿ ಇಸ್ಲಾಂ ಸ್ವೀಕರಿಸಿದರು.
[1] ಹುದೈಬಿಯಾ ಒಪ್ಪಂದದ ಒಂದು ಷರತ್ತಿನ ಪ್ರಕಾರ ಮಕ್ಕಾದಿಂದ ಯಾರಾದರೂ ಮುಸಲ್ಮಾನರ ಬಳಿಗೆ ಬಂದರೆ ಅವರನ್ನು ಮಕ್ಕಾಗೆ ಮರಳಿ ಕಳುಹಿಸಬೇಕು. ಇಂತಹ ಸ್ಥಿತಿಯಲ್ಲಿ ಸತ್ಯನಿಷೇಧಿ ಮಹಿಳೆಯರು ಇಸ್ಲಾಂ ಸ್ವೀಕರಿಸಿ ಮುಸಲ್ಮಾನರ ಬಳಿಗೆ ಬಂದರೆ ಏನು ಮಾಡಬೇಕೆಂದು ಈ ವಚನದಲ್ಲಿ ಹೇಳಲಾಗಿದೆ. ಮುಸ್ಲಿಮರು ಅವರನ್ನು ಸತ್ಯನಿಷೇಧಿಗಳ ಬಳಿಗೆ ಮರಳಿ ಕಳುಹಿಸಬಾರದು. ಅವರು ಸತ್ಯನಿಷೇಧಿಗಳಿಗೆ ಧರ್ಮಸಮ್ಮತವಲ್ಲ. ಅವರ ಗಂಡಂದಿರು ಅವರಿಗೆ ನೀಡಿದ ಮಹರ್ ಅವರಿಗೆ ವಾಪಸು ಕೊಟ್ಟು ಅವರನ್ನು ವಿಚ್ಛೇದಿಸಬೇಕು. ಇದ್ದ ಕಳೆದ ನಂತರ ಮುಸ್ಲಿಮರಿಗೆ ಆಕೆಯನ್ನು ಮಹರ್ ನೀಡಿ ವಿವಾಹವಾಗಬಹುದು. ಅವರನ್ನು ಪರೀಕ್ಷಿಸಬೇಕು ಎಂದರೆ ಅವರು ಯಾವ ಉದ್ದೇಶದಿಂದ ಬಂದಿದ್ದಾರೆಂದು ತನಿಖೆ ಮಾಡಬೇಕು ಎಂದರ್ಥ.
[2] ಅಂದರೆ ಮುಸಲ್ಮಾನರ ಪತ್ನಿಯರಲ್ಲಿ ಯಾರಾದರೂ ಸತ್ಯನಿಷೇಧಿಯಾಗಿದ್ದರೆ ಅವಳೊಂದಿಗಿನ ದಾಂಪತ್ಯವನ್ನು ಮುಂದುವರಿಸಬಾರದು. ಆಕೆಗೆ ವಿಚ್ಛೇದನ ನೀಡಿ ಮಹರ್ ವಾಪಸು ಪಡೆಯಬೇಕು.