[1] ಬಹುದೇವವಿಶ್ವಾಸಿಗಳೊಡನೆ ಯುದ್ಧ ನಡೆಯುವಾಗಲೆಲ್ಲಾ ಅವರು ಹೀಗೆ ಪ್ರಾರ್ಥಿಸುತ್ತಿದ್ದರು: "ಓ ಅಲ್ಲಾಹ್! ಅಂತಿಮ ಪ್ರವಾದಿಯನ್ನು ಬೇಗನೇ ಕಳುಹಿಸು. ನಾವು ಆ ಪ್ರವಾದಿಯೊಂದಿಗೆ ಸೇರಿ ಈ ಬಹುದೇವವಿಶ್ವಾಸಿಗಳ ವಿರುದ್ಧ ಗೆಲುವು ಪಡೆಯುತ್ತೇವೆ." ಆದರೆ ಅಂತಿಮ ಪ್ರವಾದಿ ಬಂದಾಗ ಅವರು ಆ ಪ್ರವಾದಿಯ ಸಂದೇಶವನ್ನು (ಕುರ್‌ಆನನ್ನು) ತಿರಸ್ಕರಿಸಿ ಅವರ ವಿರುದ್ಧವೇ ದ್ವೇಷ ಕಟ್ಟಿಕೊಂಡರು.
[1] ಯಹೂದಿಗಳು ಅಂತಿಮ ಪ್ರವಾದಿಯ ಆಗಮನವನ್ನು ನಿರೀಕ್ಷಿಸುತ್ತಿದ್ದರು. ಅಂತಿಮ ಪ್ರವಾದಿಯ ಎಲ್ಲಾ ಗುಣಲಕ್ಷಣಗಳನ್ನು ಅವರ ಗ್ರಂಥಗಳಲ್ಲಿ ವಿವರಿಸಲಾಗಿತ್ತು. ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಲ್ಲಿ ಈ ಎಲ್ಲಾ ಗುಣಲಕ್ಷಣಗಳಿದ್ದವು ಮತ್ತು ಅವರು ಅಂತಿಮ ಪ್ರವಾದಿಯೆಂದು ಯಹೂದಿಗಳಿಗೆ ಸಂಪೂರ್ಣ ಖಾತ್ರಿಯಿತ್ತು. ಆದರೆ ಅವರ ನಿರೀಕ್ಷೆಯಂತೆ ಆ ಪ್ರವಾದಿ ಯಹೂದಿ ವಂಶದಲ್ಲಿ ಹುಟ್ಟಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಅವರು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರನ್ನು ಮತ್ತು ಅವರು ತಂದ ಸಂದೇಶವನ್ನು ತಿರಸ್ಕರಿಸಿದರು.
[1] ನಾವು ತೌರಾತ್ (ತೋರಾ) ನಲ್ಲಿ ವಿಶ್ವಾಸವಿಟ್ಟಿದ್ದೇವೆ, ಆದ್ದರಿಂದ ನಮಗೆ ಕುರ್‌ಆನ್‌ನಲ್ಲಿ ವಿಶ್ವಾಸವಿಡಬೇಕಾದ ಅಗತ್ಯವಿಲ್ಲ ಎಂದು ಅವರು ಹೇಳುತ್ತಿದ್ದರು. ಆದರೆ ವಾಸ್ತವವಾಗಿ ಅವರು ತೌರಾತ್‌ನಲ್ಲೂ ಸರಿಯಾಗಿ ವಿಶ್ವಾಸವಿಟ್ಟಿರಲಿಲ್ಲ. ತೌರಾತ್‌ನಲ್ಲಿ ವಿಶ್ವಾಸವಿಟ್ಟಿದ್ದೇವೆಂಬ ಅವರ ಮಾತು ಸತ್ಯವಾಗಿದ್ದರೆ ಅವರು ತೌರಾತನ್ನು ಬೋಧಿಸಲು ಬಂದ ಪ್ರವಾದಿಗಳನ್ನು ಕೊಲೆ ಮಾಡುತ್ತಿರಲಿಲ್ಲ.